Sunday, 5 March 2017

ಪ್ರಿಯ ಶಿಷ್ಯೆ - ಬ.ನ.ಸುಂದರರಾವ್


ಬ ನ ಸುಂದರ ರಾಯರು ಬರೆದ "ಪ್ರಿಯ ಶಿಷ್ಯೆ" ಎಂಬ ಈ ಕಥೆಯು ಬಹಳ ಹಿಂದೆ "ಗೋಕುಲ" ಎಂಬ ವಾರ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇದನ್ನೇ ಆಧಾರವಾಗಿಟ್ಟುಕೊಂಡು ಕೆಲವು ಬದಲಾವಣೆಗಳೊಂದಿಗೆ ನಂತರ "ಚಲೋ ಮೈಸೂರು" ಎಂಬ ಕಾದಂಬರಿಯನ್ನು ಬರೆದರು. ಈ ಕಾದಂಬರಿಯಲ್ಲಿ ಕಥೆಗಿಂತ ಅಂದಿನ ದಿನಗಳ ಸ್ವಾತಂತ್ರದ ಹೋರಾಟ, ಸತ್ಯಾಗ್ರಹ, ಚಳುವಳಿ, ಸ್ವಾತಂತ್ರ ಹೋರಾಟಗಾರರು ಪಟ್ಟ ಬವಣೆಗಳು, ಘಟನೆಗಳು ಮುಖ್ಯವಾಗಿವೆ. 

ವಿಶ್ವವಿದ್ಯಾಲಯದ ಪರಿಕ್ಷೆ ಮುಕ್ತಾಯವಾಗಿತ್ತು. ಅಂದೇ ಕಡೆಯ ದಿನ. ಮಧ್ಯಾಹ್ನ ಮೂರುಘಂಟೆಗೆಲ್ಲ ಪರಿಕ್ಷೆ ಮುಗಿದಿತ್ತು. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆಲ್ಲಾ ಸಂಪೂರ್ಣ ಬಿಡುವು, ಹೌದು ವರ್ಷವೆಲ್ಲಾ ಪುಸ್ತಕ ಹಿಡಿದು, ಅವುಗಳೊಂದಿಗೆ ಹೆಣಗಾಡಿ, ಅವುಗಳ ಸಾರವನ್ನೆಲ್ಲಾ ತಮ್ಮ ತಲೆಗೆ ತುಂಬಿಕೊಳ್ಳುವುದೆಂದರೆ ಅದು ಸಾಮಾನ್ಯ ವಿಷಯವಲ್ಲ. ಅಂದಮೇಲೆ ಬಿಡುವಾದರೂ ಎಲ್ಲಿ ಸಿಗಬೇಕು? ಒಂದು ವೇಳೆ ಸಿಕ್ಕರೆ ಕನಸಿನಲ್ಲಿ ಅಷ್ಟೆ.
ಪ್ರಭಾವತಿ ತನ್ನ ಗೆಳತಿಯರೊಂದಿಗೆ ಪಾರ್ಕ್‍ನಲ್ಲಿ ಅಡ್ಡಾಡಲು ಹೊರಟಳು. ಅವರಿಗೆಲ್ಲ ಒಂದು ದೊಡ್ಡ ಬಂಡೆಯನ್ನೇ ತಲೆಯ ಮೇಲಿಂದ ಇಳಿಸಿದಂತಾಗಿತ್ತು. ಹೌದು, ಪ್ರಭಾವತಿ ಮತ್ತು ಅವಳ ಗೆಳತಿಯರಿಗೆ ಅದೇ ಕಡೆಯ ವರ್ಷದ ಪರಿಕ್ಷೆ... ಈ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಅದರ ವಿದ್ಯಾಭ್ಯಾಸ ಒಂದು ಗುರಿ ಮುಟ್ಟಿದಂತಾಗುತ್ತಿತ್ತು. ಇಷ್ಟು ದಿನ ಕಷ್ಟಪಟ್ಟಿದ್ದಕ್ಕೆ ಸಾರ್ಥಕವಾದಂತೆ ಅವರ ಹೆಸರಿನ ಕೊನೆಯಲ್ಲಿ ಬಿ.ಎಸ್‍ಸಿ. ಎಂಬ ಅಕ್ಷರಗಳು ಶೋಭಿಸತೊಡಗಬೇಕಾಗಿತ್ತು.
ಗೆಳತಿಯರೆಲ್ಲ ಹರಟೆಯಲ್ಲಿ ತಲ್ಲೀನರಾಗಿದ್ದರು. ಅವರ ಹರಟೆಯಲ್ಲಿ ಇಂಥ ವಿಷಯವೇ ಇರಬೇಕೆಂಬ ನಿಯಮವಿರಲಿಲ್ಲ. ಎಲ್ಲರಿಗೂ ತಮ್ಮ ಭವಿಷ್ಯದ ಯೋಚನೆ ಇದ್ದರೂ ಸಹ, ಕೆಲವರು ತಮ್ಮ ಅಧ್ಯಾಪಕರ ಬಗ್ಗೆ ಟೀಕೆಗೆ ತೊಡಗಿದ್ದರು. ಇನ್ನು ಕೆಲವರು ಇನ್ನೇನೂ ತೋಚದೇ ತಮ್ಮ ಮನೆಯ ವಿಚಾರಗಳನ್ನೇ ಹೊರಗೆಡಹುತ್ತಿದ್ದರು. ಮತ್ತೆ ಕೆಲವರಿಗೆ ತಮಗೆ ಯಾವ ಉದ್ಯೋಗ ಹೊಂದಬಹುದು.. ಎಂಬ ಆಲೋಚನೆ; ಇನ್ನು ಕೆಲವರಿಗೆ ವಿದ್ಯಾಭ್ಯಾಸವನ್ನು ಮುಂದುವರೆಸುವ ಯೋಚನೆ.
"ಅಂತೂ ತಮ್ಮ ಕೆಮಿಸ್ಟ್ರಿ ಲೆಕ್ಚರರಿಂದ ಬಿಡುಗಡೆಯಾಯಿತಮ್ಮ" ಲಲಿತ ಕೊಂಕಿ ನುಡಿದಳು.
"ಅದೇಕೆ, ಅವರನ್ನು ಕಂಡರೆ ನಿನಗೆ ಅಷ್ಟುಕೋಪ...."ನಾಣಿಯ ಕುತೂಹಲದ ಪ್ರಶ್ನೆ...
'ಅವರಂತೂ ಬಹಳ ಬೇಧಭಾವನೆ.... ನಾನೆಷ್ಟು ಚೆನ್ನಾಗಿ ನೋಟ್ಸ್ ಬರೆದು ತೋರಿಸಿದರೂ... ಸರಿಯಾಗಿದೆ ಅಂತ ಅವರ ಬಾಯಲ್ಲಿ ಎಂದೂ ಬರುತ್ತಿರಲಿಲ್ಲ.. ಪ್ರಭಾವತಿ ಬರೆದ ನೋಟ್ಸ್ ಆದರೆ... ಅದರ ಮೇಲೆ ಕಾಮೆಂಟ್ಸ್ ಇಲ್ಲವೇ ಇಲ್ಲ... ಪ್ರಭಾವತಿ ಇರೋವಾಗ ನಾವೆಲ್ಲಾ ಅವರ ಕಣ್ಣಿಗೆ ಬೀಳ್ತಾ ಇರಲಿಲ್ಲ.." ಲಲಿತ ತನ್ನ ಮಾತನ್ನು ಸಮರ್ಥಿಸಿದಳು.
ಪ್ರಭಾವತಿ ಎಷ್ಟಾಗಲೀ... ರೂಪವತಿ.."ಕುರೂಪಿ ಕುಮುದಳ ಅಸೂಯೆಯ ಭೂಬಾಣ ಬಂದೆರಗಿತ್ತು.
ಪ್ರಭಾವತಿಯ ಅಣ್ಣ, ಆ ಕೆಮಿಸ್ಟ್ರಿ ಲೆಕ್ಚರರ್ ಇಬ್ಬರೂ ಸ್ನೇಹಿತರಂತೆ; ಅವರು ಪ್ರಭಾವತಿಯ ಮನೆಗ ಹೋಗ್ತಾ ಇರ್ತಾರಂತೆ, ಅವರೀ ಪ್ರಭಾವತಿಗೆ ನೋಟ್ಸ್ ಬರೆಸಿ, ಕ್ಲಾಸಿನಲ್ಲಿ ನಮ್ಮೆಲ್ಲರ ಎದುರಿಗೆ ಪ್ರಭಾವತಿಗೆ ಶಹಭಾಸ್‍ಗಿರಿ ಕೊಡ್ತಾರೇನೋ.." ಎಲ್ಲರಿಗೂ ಕುತೂಹಲ ಕೆರಳಿಸಿದ್ದಳು ಕಾತ್ಯಾಯಿನಿ.
ಓ.. ಅದಕ್ಕೆ... ಇನ್ನೇನು ಸಧ್ಯದಲ್ಲೇ ನಮಗೆಲ್ಲ ಲಾಡು ಊಟ..." ಒಡನೆಯೇ ಶೋಭಳ ಉದ್ಗಾರ..
ಎಲ್ಲರೂ ಒಬ್ಬರ ಮುಖ ಒಬ್ಬರು ನೋಡಿನಕ್ಕರು. ಆ ನಗು ಪಾರ್ಕ್‍ನಲ್ಲೆಲ್ಲಾ ಪ್ರತಿಧ್ವನಿಸಿತ್ತು.
ತನ್ನ ಬಗ್ಗೆ ಗೆಳತಿಯರಲ್ಲಿ ನಡೆಯುತ್ತಿದ್ದ ಮಾತುಗಳನ್ನೆಲ್ಲಾ ಪ್ರಭಾವತಿ ಮೌನವಾಗಿಯೇ ಕೇಳುತ್ತಿದ್ದಳು.
"ಓ ನಮ್ಮ ಪ್ರಭಾವತಿ... ಮೌನ ಗೌರಿ ವ್ರತ ಆರಂಭಿಸಿದ್ದಾಳೆಂದು ತೋರುತ್ತದೆ.." ಗೆಳತಿಯರು ಪ್ರಭಾವತಿಯನ್ನು ಕೆಣಕಿದರು.
ಪ್ರಭಾವತಿಗಾದರೋ ಗೆಳತಿಯರನ್ನು ಕಂಡು ಒಮ್ಮೆ ಸಿಟ್ಟು ಬಂದರೆ ಮತ್ತೊಮ್ಮೆ "ಕೆಮಿಸ್ಟ್ರಿ ಲೆಕ್ಚರರ್"ನ ಪ್ರೀತಿಯ ಶಿಶ್ಯೆ ತಾನಾಗಿರುವುದಕ್ಕಾಗಿ ಹೆಮ್ಮೆಯೂ ಆಗುತ್ತಿತ್ತು. ಹೌದು, ಕೆಮಿಸ್ಟ್ರಿ ಅಧ್ಯಾಪಕನಾದ ಮೂರ್ತಿ ಸುಂದರ ಯುವಕ. ಮೇಲಾಗಿ ಹಸನ್ಮುಖಿ. ಹಿತಮಿತವಾದ ಮಾತುಕತೆ, ಸರಳವಾದ ಉಡಿಗೆ ತೊಡಿಗೆ, ಒಟ್ಟಿನಲ್ಲಿ ಆಕರ್ಷಣೀಯ ವ್ಯಕ್ತಿ. ಆತನ ಪ್ರಿಯಶಿಶ್ಯೆಯರಾಗಲು ಎಷ್ಟೋ ಮಂದಿ ವಿದ್ಯಾರ್ಥಿನಿಯರು ಕಾತುರರಾಗಿದ್ದರು. ಅವರೆಲ್ಲರನ್ನೂ ತಪ್ಪಿಸಿ, ಪ್ರಭಾವತಿ ಆ ಸ್ಥಾನವನ್ನು ಆಕ್ರಮಿಸಿದ್ದಳು. ಇದರಿಂದಾಗಿ ಪ್ರಭಾವತಿಯನ್ನು ಕಂಡು ಅವಳ ಗೆಳತಿಯರಿಗೆ ಅಸೂಯೆಯೂ ಸಾಕಷ್ಟಿತ್ತು. ನಿಸ್ಸಹಾಯಕರಾದ ಅವರು ಮತ್ತೇನನ್ನೂ ಮಾಡಲಾಗದೇ ಕೇವಲ ತಮ್ಮ ಬಾಯಿ ಮಾತುಗಳಿಂದ ತಮ್ಮ ಅಸೂಯೆಯನ್ನು ಹೊರಗೆಡಹಿ, ಅಷ್ಟರಲ್ಲಿಯೇ ತೃಪ್ತರಾಗುತ್ತಿದ್ದರು.
ಪ್ರಭಾವತಿ ತನ್ನ ಗೆಳತಿಯರಿಗೆಲ್ಲ "ನೀವೆಲ್ಲ ಏನು ಬೇಕಾದರೂ ಅಂದುಕೊಳ್ಳಿ.. ನೀವು ಮಾತನಾಡುವುದಕ್ಕೆ ಅಡ್ಡಿಪಡಿಸುವ ಶಕ್ತಿ ನನಗಿಲ್ಲ. ನಾನಂತೂ ಏನೂ ಮಾತನಾಡುವುದಿಲ್ಲ.." ಎಂದು ಒಂದೇ ಉತ್ತರ ನೀಡಿ ಸುಮ್ಮನಾಗಿಬಿಟ್ಟಳು.
ಹೀಗೆಯೇ ಸ್ವಲ್ಪ ಹೊತ್ತು ಸಾಗಿತು. ಗೆಳತಿಯರೆಲ್ಲಾ ಒಬ್ಬೊಬ್ಬರಾಗಿ ಚದುರಿದರು. ಪ್ರಭಾವತಿಯೂ ಸಹ ತನ್ನ ಮನೆಯತ್ತ ಹೆಜ್ಜೆ ಹಾಕತೊಡಗಿದಳು.
*******************
ಪ್ರಭಾವತಿಯ ತಂದೆ ಶಂಕರರಾಯರು ತಕ್ಕ ಮಟ್ಟಿಗೆ ಅನುಕೂಲಸ್ಥರು. ದೊಡ್ಡ ಆಧಿಕಾರಿಗಳೆನಿಸಿ ಶ್ರೀಮಂತರಲ್ಲದಿದ್ದರೂ, ಬಡವರಲ್ಲ. ತಾಲ್ಲೂಕಿನ ಆಧಿಕಾರಿಗಳಾಗಿ ಸಾಕಷ್ಟು ಕೀರ್ತಿಗಳಿಸಿದ್ದರು. ಮನೆಯಲ್ಲಿ ಹೆಚ್ಚಿನ ಖರ್ಚೂ ಇರಲಿಲ್ಲ. ಒಬ್ಬನೇ ಮಗ ಶೇಖರ. ಹೆಣ್ಣುಮಗಳು ಪ್ರಭಾವತಿ. ಶೇಖರ ತನ್ನ ಕಾಲೇಜು ವ್ಯಾಸಂಗ ಮುಗಿಸಿ, ಉನ್ನತ ಹುದ್ದೆಯಲ್ಲಿದ್ದ. ಈ ವರ್ಷ ಪ್ರಭಾವತಿಯ ಓದೂ ಮುಗಿದಂತಾಗಿತ್ತು. ರಾಯರು ನಿವೃತ್ತರಾಗಿ ನಗರದಲ್ಲಿ ನೆಲೆಸಿ ಕೆಲವೇ ತಿಂಗಳುಗಳಾಗಿದ್ದುವು. ಪ್ರಭಾವತಿಯ ಮದುವೆಯಾದರೆ ಆಮೇಲೆ ಮನೆಗೆ ಸೊಸೆಯನ್ನು ತರುವುದು - ಎಂದಾಗಿತ್ತು ರಾಯರ ಆಲೋಚನೆ. ಪ್ರಭಾವತಿಯ ತಾಯಿ ಶಾರದಮ್ಮ ಮಗಳ ಹೈಸ್ಕೂಲ್ ವಿದ್ಯಾಭ್ಯಾಸ ನಡೆಯುತ್ತಿದ್ದಾಗಿನಿಂದ ಮಗಳ ಮದುವೆಗಾಗಿ ರಾಯರನ್ನು ಒತ್ತಾಯ ಪಡಿಸುತ್ತಲೇ ಇದ್ದರು. ರಾಯರೂ ಅನೇಕ ಕಾರಣಗಳನ್ನು ಹೇಳುತ್ತಾ ಮುಂದೂಡಿಕೊಂಡೇ ಬಂದಿದ್ದರು. ಪ್ರಭಾವತಿಯ ವಿದ್ಯಾಭ್ಯಾಸವೂ ಒಂದು ಮಟ್ಟಕ್ಕೆ ಬಂದಮೇಲೆ ಈಗ ಮುಂದೂಡುವಂತಿರಲಿಲ್ಲ.
ಪ್ರಭಾವತಿಗೂ ಸಹ ಒಮ್ಮೊಮ್ಮೆ ತನ್ನ ಭವಿಷ್ಯದ ಆಲೋಚನೆ ಮುಂದೆ ಬಂದು ನಿಲ್ಲುತ್ತಿತ್ತು. ತನ್ನ ಭವಿಷ್ಯದ ನಿರ್ಧಾರ ಪ್ರಭಾವತಿಗೆ ತಿಳಿಯದೇ ಇರಲಿಲ್ಲ. ತಾನು ಪದವೀಧರೆಯಾಗುವೆನು - ಎಂಬ ನಿರೀಕ್ಷೆಯೊಂದಿಗೇ ಮನೆಯಲ್ಲಿ ತನ್ನ ಮದುವೆಯ ಸನ್ನಾಹಗಳೂ ನಡೆಯುತ್ತಿದ್ದುದು ಅವಳಿಗೆ ತಿಳಿದಿತ್ತು.
ಆದರೆ,,, ವರ,,,? ಪ್ರಭಾವತಿವ ಮನಸ್ಸೇನೋ ಅವಳಿಗರಿವಿಲ್ಲದಂತೆಯೇ ಮೂರ್ತಿಯನ್ನು ಒಲಿದಿತ್ತು. ಅದಕ್ಕೆ ಕಾರಣವಿಲ್ಲದೇ ಇರಲಿಲ್ಲ. ಶಂಕರರಾಯರು ಇಪ್ಪತ್ತು ವರ್ಷಗಳ ಹಿಂದೆ ಕೋಲಾರದಿಂದ ವರ್ಗವಾಗಿ ಚಿತ್ರದುರ್ಗಕ್ಕೆ ಹೋದಾಗ ಮೂರ್ತಿಯ ತಂದೆಯ ಪರಿಚಯವಾಯ್ತು. ಚಿತ್ರದುರ್ಗದಲ್ಲಿದ್ದಷ್ಟು ದಿನ ಶಂಕರರಾಯರೂ ಮೂರ್ತಿಯ ತಂದೆ ಶ್ರೀನಿವಾಸರಾಯರೂ ಆಪ್ತ ಸ್ನೇಹಿತರಾಗಿದ್ದರು. ಹಾಗೆಯೇ ಒಂದೇ ವಯಸ್ಸಿನ ಶೇಖರ ಹಾಗೂ ಮೂರ್ತಿ ಇಬ್ಬರೂ ಗೆಳೆಯರಾದರು. ಮೂರು ವರ್ಷದ ನಂತರ ವರ್ಗದ ಪ್ರಯುಕ್ತ ಇಬ್ಬರೂ ಒಬ್ಬರೊನ್ನೊಬ್ಬರು ಅಗಲಬೇಕಾಯಿತು. ಇಪ್ಪತ್ತು ವರ್ಷದ ನಂತರ ಪುನಃ ಇಬ್ಬರು ಗೆಳೆಯರು ಕಾಲೇಜಿನಲ್ಲಿ ಭೇಟಿಯಾಗಿದ್ದರು. ಈ ದೀರ್ಘ ಅವಧಿಯಲ್ಲಿ ಶಂಕರರಾಯರ ಸಂಸಾರದಲ್ಲಿ ಅಂತಹ ವ್ಯತ್ಯಾಸವೇನೂ ಇಲ್ಲದಿದ್ದರೂ, ಶ್ರೀನಿವಾಸರಾಯರ ಸಂಸಾರದಲ್ಲಿ ಮಹತ್ತರ ಬದಲಾವಣೆಗಳು ನಡೆದಿದ್ದವು. ಅವರು ಸಂಸಾರದ ಜವಾಬ್ದಾರಿಯನ್ನು ಮೂರ್ತಿಯ ಮೇಲೆ ಹಾಕಿ ಮರಣಕ್ಕೆ ತುತ್ತಾಗಿದ್ದರು. ಇದಕ್ಕಿಂತಾ ಮುಖ್ಯವಾಗಿ ಮೂರ್ತಿಯ ಹೃದಯದ ಮೇಲೆ ಘಾಸಿಯಾಗುವಂಥ ಘಟನೆಯೂ ನಡೆದು ಹೋಗಿತ್ತು. ಶೇಖರನ ಭೇಟಿಯಾದ ಮೇಲೆ ಮೂರ್ತಿ ಆಗಾಗ ಶೇಖರನ ಮನೆಗೆ ಹೋಗಲಾರಂಭಿಸಿದ. ತನ್ನ ವಿದ್ಯಾರ್ಥಿನಿ, ಬುದ್ಧಿವಂತ ಹುಡುಗಿ ಶೇಖರನ ತಂಗಿ ಪ್ರಭಾವತಿಯೇ ಎಂದು ತಿಳಿದಾಗ ಮೂರ್ತಿಯ ಸಂತೋಷ ಇಮ್ಮಡಿಸಿತ್ತು. ದಿನ ಕಳೆದಂತೆ ಮೂರ್ತಿ ಪ್ರಭಾವತಿಯ ಗುರು ಶಿಷ್ಯ ಭಾಂಧವ್ಯ ಅವರಿಗರಿವಿಲ್ಲದೆಯೇ ಪ್ರಣಯದಲ್ಲಿರೂಪುಗೊಂಡಿತ್ತು. ಆದರೆ ಒಮ್ಮೊಮ್ಮೆ ಮೂರ್ತಿಯ ಮುಖ ಕಂಡಾಗ, ಸೂಕ್ಷ್ಮವಾಗಿ ಪರಿಶೀಲಿಸಿದಾಗ ಯಾವುದೋ ಅವ್ಯಕ್ತ ಚಿಂತೆಯ ಗೆರೆ ಮೂಡಿರುತ್ತಿದ್ದುದು ಪ್ರಭಾವತಿಗೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆದರೆ ಕಾರಣ ತಿಳಿಯದೆ ಪ್ರಭಾವತಿ ಪರಿತಪಿಸುತ್ತಿದ್ದಳು; ಏನಿರಬಹುದು? ಎಂಬ ಕುತೂಹಲ ಎಷ್ಟೋಬಾರಿ ಅವಳನ್ನು ಕಾಡಿದುದೂ ಉಂಟು. ಆದರೆ ಮೂರ್ತಿಯನ್ನೆ ನೇರವಾಗಿ ಕೇಳುವ ಸಾಹಸವನ್ನು ಪ್ರಭಾವತಿ ಮಾಡಲಿಲ್ಲ. ಎಂದಾದರೊಂದು ದಿನ ತಾನೇ ತಿಳಿಯುವುದು ಎಂದುಕೊಂಡಳು.
ಅದೇ ವೇಳೆಗೆ ಮೂರ್ತಿಯೂ ಶೇಖರನನ್ನು ಹುಡುಕಿಕೊಂಡು ಬಂದ. ಶೇಖರ ಮನೆಯಲ್ಲಿ ಇರಲಿಲ್ಲ. ಪ್ರಭಾವತಿಯೇ ಮೂರ್ತಿಯನ್ನು ಒಳಗೆ ಕರೆಯಬೇಕಾಯಿತು. ಆಗ ರಾಯರು ತಮ್ಮ ಆಫೀಸ್‍ರೂಂನಲ್ಲಿದ್ದರು. ತಾಯಿ ಶಾರದಮ್ಮ ಅಡಿಗೆಮನೆ ಸೇರಿದ್ದರು. ಇಂದೂ ಸಹ ಮೂರ್ತಿಯ ಮುಖ ಚಿಂತೆಯಿಂದ ಬಾಡಿತ್ತು. ಪ್ರಭಾವತಿಯ ಕುತೂಹಲ ಹೆಚ್ಚಾಯಿತು. "ಈಗೇಕೆ ಕೇಳಿಬಿಡಬಾರದು?" ಎಂದು ಅವಳ ಮನ ಪ್ರಶ್ನಿಸಿತು. ಒಡನೆಯೇ "ಕೇಳಿಯೇ ಬಿಡಬೇಕು" ಎಂಬ ನಿರ್ಧಾರವೂ ಆಯಿತು. ಕಡೆಗೆ ಧೈರ್ಯಮಾಡಿ ಕೇಳಿಯೇ ಬಿಟ್ಟಳು...
"ನಿಮ್ಮನ್ನು ಯಾವುದೋ ಚಿಂತೆ ಕಾಡುತ್ತಿರುವುದು ಎಷ್ಟೋ ಬಾರಿ ನನಗೆ ಗೋಚರಿಸಿದೆ. ಅದೇನೆಂದು ಕೇಳಬಹುದೇ?"
ಮೂರ್ತಿ ಬಲವಂತದ ನಗೆ ನಕ್ಕು... "ಚಿಂತೆ ! ಹೌದು.. ಚಿಂತೆಯೇನೋ ಇದೆ.. ಮನುಷ್ಯನಾದವನಿಗೆ ಚಿಂತೆ ಕಟ್ಟಿಟ್ಟದ್ದೇ ತಾನೇ? ಆ ಚಿಂತೆಯನ್ನು ನೀಗಿಸಲು ನಿಮಗೆ ಶಕ್ತಿಯಿದೆಯೇ?" ಎಂದ.
ಏನೆಂಬುದನ್ನು ತಿಳಿಸಿ, ಸರಿಪಡಿಸಲು ಕೈಲಾದ ಪ್ರಯತ್ನ ಮಾಡುತ್ತೇನೆ.."
"ಪ್ರಯತ್ನ ಮಾಡುತ್ತೀರಾ.."
"ಧಾರಾಳವಾಗಿ .. ಖಂಡಿತಾ ಪ್ರಯತ್ನಿಸುತ್ತೇನೆ.."
"ಈಗ ಬೇಡ. ಇನ್ನೆಂದಾದರೂ ತಿಳಿಸುತ್ತೇನೆ.." ಎಂದು ಹೇಳುತ್ತಾ ಮೂರ್ತಿ ಹೊರಟುನಿಂತ. ಕಡೆಗೂ ಮೂರ್ತಿಯ ಚಿಂತೆ ಪ್ರಭಾವತಿಗೆ ಒಗಟಾಗಿಯೇ ಉಳಿಯಿತು.
ಪ್ರಭಾವತಿ ಕಾಲೇಜು ವಿದ್ಯಾಭ್ಯಾಸ ಮುಗಿಸಿ, ಯುವತಿ ಎನಿಸಿದ್ದರೂ ಶೇಖರನ ದೃಷ್ಟಿಯಲ್ಲಿ ಅವಳಿನ್ನೂ ಚಿಕ್ಕ ಹುಡುಗಿಯೇ ಆಗಿದ್ದಳು. ಚಿಕ್ಕ ಹುಡುಗರನ್ನು ಕೀಟಲೆ ಮಾಡುವಂತೆ ಪ್ರಭಾವತಿಯನ್ನೂ ಕೀಟಲೆ ಮಾಡಿ ಪೀಡಿಸುತ್ತಿದ್ದ. ಆಗಾಗ್ಗೆ ಏನಾದರೂ ನೆಪ ತೆಗೆದು, ಕೀಟಲೆ ಮಾಡಿ ಪ್ರಭಾವತಿಯ ಕಣ್ಣಲ್ಲಿ ನೀರು ತರಿಸಿ ಕೈಬಿಡುತ್ತಿದ್ದ.
ಅಂದು ಪ್ರಭಾವತಿ ತನ್ನ ಪುಸ್ತಕಗಳನ್ನೆಲ್ಲವನ್ನೂ ಕಟ್ಟುಗಳನ್ನಾಗಿ ವಿಂಗಡಿಸಿ ತೆಗೆದಿಡುತ್ತಿದ್ದಳು. ಸೋಮವಾರವಾದ್ದರಿಂದ ರಾಯರು, ಶಾರದಮ್ಮ ಈಶ್ವರನ ದೇವಸ್ಥಾನಕ್ಕೆ ಹೊರಟಿದ್ದರು. ರಾಯರು ನಿವೃತ್ತರಾದಮೇಲೆ ಪ್ರತಿ ಸೋಮವಾರ ಈಶ್ವರನ ದರ್ಶನಕ್ಕೆ ಹೋಗಿಬರುವುದು ವಾಡಿಕೆಯಾಗಿತ್ತು. ಮನೆಯಲ್ಲಿದ್ದವರು ಶೇಕರ, ಪ್ರಭಾವತಿ ಇಬ್ಬರೆ. ಪುಸ್ತಕಗಳನ್ನೆಲ್ಲವನ್ನೂ ಕಟ್ಟುಗಳನ್ನಾಗಿ ವಿಂಗಡಿಸಿ ತೆಗೆದಿಡುತ್ತಿದ್ದ ಪ್ರಭಾವತಿಯನ್ನು ಶೇಖರ ನೋಡಿದ. ಅಂದು ಬೆಳಗಿನಿಂದ ಅವಳನ್ನು ಕೀಟಲೆ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಹಾಗೆಯೇ ಪ್ರಭಾವತಿಯ ಕೋಣೆಯತ್ತ ಹೊರಟ.
"ಪರೀಕ್ಷೆ ಮುಗಿಯಿತು ಅಂತ ಪುಸ್ತಕಗಳನ್ನೆಲ್ಲಾ ಕಟ್ಟಿಡುತ್ತಾ ಇದ್ದೀಯಲ್ಲಾ... ಒಂದು ವೇಳೆ ಪರಿಕ್ಷೆಯಲ್ಲಿ ಫೇಲಾದರೆ.." ನಗುತ್ತಾ ಕೇಳಿದ ಶೇಖರ.
"ಸಾಕು ಸುಮ್ಮನಿರು.. ಫೇಲಂತೆ... ನಾನು ಫಸ್ಟ್‍ಕ್ಲಾಸ್ ನಿರೀಕ್ಷಿಸಿರುವಾಗ" ಪ್ರಭಾವತಿ ಸಿಡುಕಿನಿಂದ ನುಡಿದಳು.
"ಸುಮ್ಮನೆ ಹಾಗಂದೆ... ಅಷ್ಟೆ.. ಅದು ಸರಿ ಪ್ರಭಾ, ಮುಂದೇನು ನಿನ್ನ ಕಾರ್ಯಕ್ರಮ?"
"ಮುಂದಿನ ಕಾರ್ಯಕ್ರಮ ಇನ್ನೇನು... ಹಾಯಾಗಿ ವಿರಾಮ ತೆಗೆದುಕೊಳ್ಳೋದು.. ಅಷ್ಟೆ"
"ಮುಂದಕ್ಕೆ ಓದೋದಿಲ್ಲ ಹಾಗಾದರೆ..."
"ಇಷ್ಟು ದಿನ ಓದಿ ತಲೆಚಿಟ್ಟು ಹಿಡಿದಿರೋದು ಸಾಕು. ಇನ್ನು ಆ ಪುಸ್ತಕದ ಮುಖ ಸಹ ನೋಡೋಲ್ಲ. ಒಂದು ಡಿಗ್ರಿ ಅಂತ ಆಯ್ತಲ್ಲ ಅಷ್ಟೇ ಸಾಕು..."
"ಹಾಗಾದರೆ... ನಿನ್ನ ಮುಂದಿನ ಕೆಲಸ.. ಮದುವೆಯಾಗಿ ಅತ್ತೆಯ ಮನೆಗೆ ಹೊರಡುವುದು... ಅಷ್ಟೇ ತಾನೇ..?
"ಏನಾದರೂ ಆಗಲಿ... ನಿನಗೇಕೆ ಆ ಚಿಂತೆ?"
"ಪ್ರಭಾ.. ಕಾಲೇಜಿನಲ್ಲಿ ಯಾರನ್ನಾದರೂ ಇಷ್ಟ ಪಟ್ಟಿದ್ದಿಯೇನು..?"
"ಹೋಗಣ್ಣ ಯಾವಾಗಲೂ ತಮಾಷೆ.. ನಿನ್ನದು.."
ನೋಡ್ಕೊಂಡಿದ್ದರೆ ಹೇಳು.. ನನ್ನ ಹತ್ತಿರ ಸಂಕೋಚ ಪಟ್ಕೋಬೇಡ.."
ಪ್ರಭಾವತಿಯ ಮನಸ್ಸು ಮೂರ್ತಿಯತ್ತ ಹೊರಳುತ್ತಿರುವುದನ್ನು ಶೇಖರ ಗಮನಿಸಿದ್ದ. ಪ್ರಭಾವತಿಯ ತಾಯಿ ತಂದೆಗಳಿಗೆ ಈ ಸಂಬಂಧದಲ್ಲಿ ಅರ್ಧಂಬರ್ಧ ಮನಸ್ಸಿತ್ತು. ಆದರೆ ಪ್ರಭಾವತಿಯೊಡನೆ ಯಾರೂ ನೇರವಾಗಿ ಈ ಪ್ರಸ್ತಾಪ ಮಾಡಿರಲಿಲ್ಲ. ಪ್ರಭಾವತಿಯ ಪರಿಕ್ಷೆ ಮುಗಿಯಲೆಂದೇ ಎಲ್ಲರೂ ಸುಮ್ಮನಿದ್ದರು. ಪರಿಕ್ಷೆ ಮುಗಿದಿತ್ತು. ಇಂದು ಪ್ರಭಾವತಿಯನ್ನು ಕೆಣಕಲೆಂದೆ ಶೇಖರ ಈ ಪ್ರಸ್ತಾಪವನ್ನು ಆರಂಭಿಸಿದ್ದ. ಶೇಖರ ಎಷ್ಟೇ ವಿಧದಲ್ಲಿ ಪ್ರಶ್ನಿಸಿದರೂ ಪ್ರಭಾವತಿ ಜಾಣ್ಮೆಯಿಂದ ಉತ್ತರ ಕೊಟ್ಟು ತಪ್ಪಿಸಿಕೊಳ್ಳುತ್ತಿದ್ದಳು. ಕಡೆಗೂ ತನ್ನ ಅಂತರಂಗವನ್ನು ಹೊರಗೆಡಲಿಲ್ಲ. ಶೇಖರನಿಗಾದರೋ ಅವಳ ಕಣ್ಣಲ್ಲಿ ನೀರು ತರಿಸಿ, ತಾನು ಸಂತೋಷ ಪಡಬೇಕೆಂಬ ಹುಚ್ಚು ಹಂಬಲ. ಕಡೆಗೆ ಶೇಖರ ಸಿಟ್ಟುಗೊಂಡಂತೆ ನಟಿಸಿ "ಪ್ರಭಾ, ನೀನು ನಿನ್ನ ಮನಸ್ಸಿನಲ್ಲಿರುವುದನ್ನು ಹೇಳದೇ ಹೋದರೆ.. ನೋಡ್ತಾ ಇರು.. ಏನು ಮಾಡ್ತೇನಂತ" ಎಂದು ಗುಡುಗಿದ.
ಪ್ರಭಾವತಿ ಹೆದರಲಿಲ್ಲ "ಏನು ಮಾಡ್ತೀಯ ನೀನು..?" ಎಂದು ಕೇಳಿದಳು.
"ನಿನ್ನನ್ನು ಎರಡನೇ ಮದುವೆಗೆ ಕೊಟ್ಟು ಮದುವೆ ಮಾಡಿಸುತ್ತೇನೆ... ಖಂಡಿತ ನೋಡ್ತಾ ಇರು" ಎಂದ ಶೇಖರ.
"ಹೂ.. ಎರಡನೇ ಮದುವೆ.. ನನ್ನ ಮದುವೆ ಮಾಡೋದು ಅಪ್ಪ ಅಮ್ಮ. ನಿನ್ನ ಮಾತು ಯಾರು ಕೇಳ್ತಾರೆ!" ದಿಟ್ಟತನದಿಂದ ಉತ್ತರಿಸಿದಳು ಪ್ರಭಾವತಿ.
ಪ್ರಭಾವತಿಯ ಅಂತರಂಗವನ್ನು ತಿಳಿಯಲು ಕೊನೆಗೂ ಶೇಖರನಿಗೆ ಸಾಧ್ಯವಾಗದೇ ಹೋಯಿತು. ಕೂಡಲೆ ಅವನಿಗೆ ಒಂದು ಆಲೋಚನೆ ಹೊಳೆಯಿತು. ಮಾತು ಮರೆಸುವನಂತೆ ನಟಿಸುತ್ತಾ.. "ಅಂದ ಹಾಗೆ... ಪ್ರಭಾ.. ನಮ್ಮ ಮೂರ್ತಿಗೆ ಮದುವೆ ಏರ್ಪಾಡಾಗುತ್ತಿದೆಯಂತೆ..."
"ಹಾ!.. ಅವರಿಗೆ ಮದುವೆಯೇ..?" ಪ್ರಭಾವತಿ ಆಶ್ಚರ್ಯದಿಂದ ಕೇಳಿದಳು.
"ಹೂ.. ಹೌದು..." ಶೇಖರ ಹೇಳಿದ.
"ನನಗೆ ಹೇಳಲೇ ಇಲ್ಲವಲ್ಲ..."
ನಿನಗೆ ಹೇಳಿಬಿಟ್ಟರೆ ಆಯಿತು... ನನ್ನನ್ನೇ ಮದುವೆ ಮಾಡ್ಕೋತೀರಾ.. ಅಂತ ಮೂರ್ತಿಯನ್ನೇ ಕೇಳಿಬಿಟ್ಟರೆ.. ಅದಕ್ಕೆ ಅವನು ನಿನ್ನ ಹತ್ತಿರ ಹೇಳಿಲ್ಲ.."
"ಹೆಣ್ಣು ಯಾವುದಂತೆ...?"
"ನನಗೆ ಸರಿಯಾಗಿ ತಿಳಿಯದು, ಹುಡುಗಿಯಂತೂ ಬಹಳ ಚಲುವೆಯಂತೆ... ಪದವೀಧರೆಯಂತೆ..." ಶೇಖರ ಪ್ರಭಾವತಿಯ ಕುತೂಹಲವನ್ನು ಮತ್ತೂ ಹೆಚ್ಚಿಸಿದ.
"ಯಾರು ಹೇಳಿದರು ನಿನಗೆ?.."
"ಇನ್ಯಾರು ಹೇಳ್ತಾರೆ.. ಮೂರ್ತಿಯೇ ಹೇಳಿದ.."
ಮೂರ್ತಿಗೆ ಮದುವೆಯೆಂಬ ಸುದ್ದಿ ಕೇಳಿದೊಡನೆ ಪ್ರಭಾವತಿಯ ಮುಖಭಾವ ಬದಲಾಯಿತು. ಧ್ವನಿ ಕುಗ್ಗಿತು. ಮುಖದಲ್ಲಿ ಚಿಂತೆಯ ಗೆರೆ ತಾಂಡವವಾಡಿತು. ಇದನ್ನು ಶೇಖರ ಚೆನ್ನಾಗಿ ಗಮನಿಸಿದ. ಪ್ರಭಾವತಿಯ ಮನಸನ್ನರಿಯಲು ಇದೆ ಸರಿಯಾದ ಉಪಾಯವೆಂದರಿತೇ ಅ ಮಾರ್ಗವನ್ನು ಹುಡುಕಿದ್ದ ಶೇಖರ. ಆದರೂ ತೋರ್ಪಡಿಸದೇ, "ಮೂರ್ತಿಗೆ ಮದುವೆಯೆಂದ ಕೂಡಲೇ ನಿನಗೇಕಿಷ್ಟು ಚಿಂತೆ..?" ಎಂದು ಕೇಳಿದ.
ಪ್ರಭಾವತಿ ಒಂದು ಕ್ಷಣದಲ್ಲಿ ಚೇತರಿಸಿಕೊಂಡು "ಎನಿಲ್ಲ ... ನನಗೇಕೆ ಚಿಂತೆ..?" ಎಂದು ಹೇಳಿ, ಆ ಮಾತನ್ನು ಅಲ್ಲಿಗೇ ಮುಕ್ತಾಯ ಮಾಡಲೆತ್ನಿಸಿದಳು. ಆದರೆ ಶೇಖರ ಬಿಡಬೇಕಲ್ಲ!
ಪುನಃ ಕೇಳಿದ.. " ಪ್ರಭಾ, ನೀನೇ ಮೂರ್ತಿಯನ್ನು ಮದುವೆಯಾಗುತ್ತೀಯೇನು..?"
ಪ್ರಭಾವತಿ ಮಾತನಾಡಲಿಲ್ಲ. ಅವಳ ಮನಸ್ಸು ಎತ್ತೆತ್ತಲೋ ಹರಿದಾಡುತ್ತಿತ್ತು. ಅವಳಿಂದ ಉತ್ತರ ಬಾರದುದನ್ನು ಕಂಡ ಶೇಖರ ಮತ್ತೆ ಕೆಣಕಿದ - "ಪ್ರಭಾ, ನಿನಗೆ ಇಷ್ಟವಿದ್ದರೆ ಹೇಳು, ನಾನು ಬೇಕಾದರೆ ಮೂರ್ತಿಗೆ ಹೇಳುತ್ತೇನೆ.."
ಪ್ರಭಾವತಿ ಗಾಬರಿಯಿಂದ ಎಚ್ಚೆತ್ತು "ಆ..." ಎಂದು ಉದ್ಗರಿಸಿದಳು.
ಶೇಖರ, "ಪ್ರಭಾ, ನಿನಗೆ ಇಷ್ಟವಿದ್ದರೆ ಹೇಳು, ನಾನು ಬೇಕಾದರೆ ಮೂರ್ತಿಗೆ ಹೇಳಿ ನಿನ್ನನ್ನೇ ಮದುವೆಯಾಗಲು ಒಪ್ಪಿಸುತ್ತೇನೆ.." ಎಂದ.
ಪ್ರಭಾವತಿಗೆ ಇಕ್ಕಟ್ಟಿನ ಪರಿಸ್ಥಿತಿಯೊದಗಿತು. ಈಗವಳ ಮುಂದೆ ಇಡೀ ಜೀವಮಾನದ ಪ್ರಶ್ನೆಯೆ ಉದ್ಭವಿಸಿತ್ತು. ಈಗ ಮಾತಾಡದೇ ಸುಮ್ಮನಿದ್ದರೆ ತನ್ನ ಭವಿಷ್ಯವನ್ನು ತಾನೇ ಹಾಳು ಮಾಡಿಕೊಂಡಂತಾಗುತ್ತಿತ್ತು. ಮೂರ್ತಿಯನ್ನು ಮದುವೆಯಾಗಲು ಪ್ರಭಾವತಿಗೆ ಸಂಪೂರ್ಣವಾದ ಒಪ್ಪಿಗೆಯಿತ್ತು. "ಮೂರ್ತಿಗೆ ಬೇರೆ ಕಡೆ ಮದುವೆ ಗೊತ್ತಾದರೆ?" ಈ ಪ್ರಶ್ನೆ ಪ್ರಭಾವತಿಯ ಪ್ರತಿಯೊಂದು ನರಗಳಲ್ಲಿಯೂ ಪ್ರತಿಧ್ವನಿಸಿತ್ತು.
ಶೇಖರ ಎಷ್ಟಾಗಲೀ ಪ್ರಭಾವತಿಯ ಅಣ್ಣ, ಅವಳ ಹಿತೈಷಿ. ಅವನ ಬಳಿ ತನ್ನ ಅಂತರಂಗವನ್ನು ತಿಳಿಸದೇ ಮತ್ತಾರ ಬಳಿ ತಿಳಿಸಬೇಕು? ಕಡೆಗೆ ಪ್ರಭಾವತಿ "ಮೂರ್ತಿಯನ್ನು ಮದುವೆಯಾಗಲು ನನ್ನ ಸಂಪೂರ್ಣ ಒಪ್ಪಿಗೆ ಇದೆ" ಎಂದು ಹೇಳಿ ಬಿಟ್ಟಳು. ಇದು ಶೇಖರನಿಗೆ ಮೊದಲೇ ತಿಳಿದಿತ್ತು. ಆದರೂ ಪ್ರಭಾವತಿಯ ಬಾಯಲ್ಲೇ ಹೇಳಿಸಬೇಕೆಂದು ಹಟ ತೊಟ್ಟು ತಾನೇ ಗೆದ್ದ. ಶೇಖರನದು ಯಾವಾಗಲೂ ಒಂದು ವಿಧವಾದ ಹುಚ್ಚು ಹಠ.
ತಂಗಿಯ ಮಾತು ಕೇಳಿ ಶೇಖರ - "ಆಗಲಿ, ನಿನ್ನ ಒಳಿತಿಗಾಗಿ ಮೂರ್ತಿಯೊಡನೆ ಈ ಪ್ರಸ್ತಾಪ ಮಾಡುತ್ತೇನೆ" ಎಂದು ಭರವಸೆಯಿತ್ತ, ತಂಗಿಯನ್ನುದ್ಧರಿಸುವವನಂತೆ.
ಅದೇ ವೇಳೆಗೆ ಮೂರ್ತಿ ಅಲ್ಲಿ ಬರಬೇಕೇ? ಮೂರ್ತಿಯನ್ನು ಕಂಡು ಪ್ರಭಾವತಿ ನಾಚಿಕೆಯ ಮುದ್ದೆಯಾದಳು. ಅವನೆದುರು ನಿಲ್ಲಲೂ ಅವಳಿಗೆ ಸಾಧ್ಯವಾಗದೇ ಹೋಯಿತು. ಏನೋ ನೆಪ ಹೇಳಿ ಒಳಕ್ಕೆ ಹೊರಟು ಹೋದಳು.
ಇದುವರೆಗೂ ತನಗೂ ಪ್ರಭಾವತಿಗೂ ನಡೆದ ಸಂಭಾಷಣೆಯೆಲ್ಲವನ್ನೂ ಶೇಖರ, ಮೂರ್ತಿಗೆ ತಿಳಿಸಿದ. ಎಲ್ಲವನ್ನೂ ಕೇಳಿದ ಮೂರ್ತಿ, "ಮುಖ್ಯವಾದ ವಿಷಯವನ್ನೇ ಬಿಟ್ಟೆಯಲ್ಲಾ.. ಈ ಸುದ್ದಿ ತಿಳಿದರೆ ನಿನ್ನ ತಂಗಿ ಒಪ್ಪುವಳೋ ಇಲ್ಲವೋ..." ಎಂದ.
"ಮುಖ್ಯವಾದ ವಿಷಯ ನಮ್ಮ ತಂದೆ ತಾಯಿಗಳಿಗೆ ಗೊತ್ತು. ಆದರೆ ಅವರು ಪ್ರಭಾವತಿಗೆ ತಿಳಿಸಿರುವಂತೆ ಕಾಣಲಿಲ್ಲ... ನಾನು ಮಾಡಿದ ಉಪಾಯ ಚೆನ್ನಾಗಿ ಫಲಿಸಿತು. ಮೂರ್ತಿ ನಿನಗೆ ಬೇರೆ ಮದುವೆಗೆ ಏರ್ಪಾಟಾಗಿದೆಯೆಂದು ತಿಳಿದ ಕೂಡಲೆ ಪ್ರಭಾ ತುಂಬಾ ಸಂಕಟ ಪಟ್ಟಳು. ಕಣ್ಣಲ್ಲಿ ನೀರೇ ಬಂದು ಬಿಟ್ಟಿತ್ತು.." ಶೇಖರ ಹೇಳಿದ.
"ಅಷ್ಟು ಪರಿಕ್ಷೆ ಮಾಡಬಾರದಾಗಿತ್ತು... ನೀನು ವಿಷಯ ತಿಳಿಸಿದ್ದರೆ ಚೆನ್ನಾಗಿರುತ್ತಿತ್ತು" ನೊಂದು ನುಡಿದ ಮೂರ್ತಿ.
"ಈಗ ತಿಳಿಸಿದರೂ ಚಿಂತೆಯಿಲ್ಲ. ಪ್ರಭಾವತಿಯ ಮನಸ್ಸು ಯಾವ ಕಾರಣಕ್ಕೂ ಬದಲಾವಣೆಯಾಗುವುದಿಲ್ಲವೆಂದು ನನಗೆ ನಂಬಿಕೆಯಿದೆ. ಅವಳನ್ನೇ ಕರೆಯುತ್ತೇನೆ, ಅದನ್ನು ಅವಳ ಬಾಯಿಂದಲೇ ಕೇಳೋಣ.." ಎನ್ನುತ್ತಾ ಒಳಕ್ಕೆ ಹೊರಟ ಶೇಖರ.
"ಏನೋ ನೆಪ ಹೇಳಿ ಪ್ರಭಾವತಿಯನ್ನೂ ಜೊತೆಯಲ್ಲೇ ಕರೆತಂದ ಶೇಖರ. ಪ್ರಭಾವತಿ ಕುರ್ಚಿಯೊಂದರಲ್ಲಿ ಕುಳಿತಳು. ಆಗ ಶೇಖರ ನಗುತ್ತಾ - "ಮೂರ್ತಿ, ನಾನು ನನ್ನ ತಂಗಿಯ ಹತ್ತಿರ ಒಂದು ಪಂದ್ಯ ಕಟ್ಟಿದ್ದೇನೆ, ಏನಾದರೂ ಮಾಡಿ ಅವಳನ್ನು ಎರಡನೇ ಮದುವೆಗೇ ಕೊಡುವುದೂ ಅಂತ..." ಪ್ರಭಾವತಿ ಸಿಟ್ಟಿನಿಂದ "ಶೇಖರ ನೀನು ಹೀಗೆಲ್ಲಾ ಮಾತನಾಡಿದರೆ ನಾನು ಎದ್ದು ಹೋಗುತ್ತೇನೆ..." ಎಂದು ಹೊರಡಲನುವಾದಳು.
ಶೇಖರ ತಂಗಿಯನ್ನು ಹೋಗಗೊಡಲಿಲ್ಲ. "ಪ್ರಭಾ, ನೀನು ಮೂರ್ತಿಯನ್ನು ಮೆಚ್ಚಿದೀಯ ಅಂತ ನನಗೆ ತಿಳಿಯಿತು. ಒಂದು ವೇಳೆ ಅವನಿಗೇ ಎರಡನೇ ಮದುವೆಯಾದರೆ... ಆಗೇನು ಮಾಡುತ್ತಿ?" ಎಂದು ಪ್ರಶ್ನಿಸಿದ.
ಪ್ರಭಾವತಿ ಅರಿತೋ ಅರಿಯದೆಯೋ "ಆದರೇನಂತೆ" ಅಂದು ಬಿಟ್ಟಳು.
ಇನ್ನು ಸುಮ್ಮನಿರುವುದು ಸರಿಯಲ್ಲವೆಂದು ಮೂರ್ತಿ ತಾನೇ ಇದ್ದ ಸಂಗತಿ ತಿಳಿಸಿದ - "ತನಗೀಗ ಎರಡನೇ ಮದುವೆಯಾಗಬೇಕಾಗಿದೆ.." ಎಂದು.
ಆಗ ಶೇಖರ ಧನಿಗೂಡಿಸಿದ - "ಹೌದು ಪ್ರಭಾ, ಈ ವಿಚಾರ ನಿನಗೆ ತಿಳಿಸಿರಲಿಲ್ಲ. ಮೂರ್ತಿಗೆ ಎರಡನೇಯ ಮದುವೆ... ಆದರೆ ನೀನೇನೂ ಯೋಚನೆ ಮಾಡಬೇಡ.. ಮಕ್ಕಳಿಲ್ಲ, ಮರಿಯಿಲ್ಲ. ಮೊದಲ ಮದುವೆ ಶಾಸ್ತ್ರಕ್ಕೆ ಆಗಿತ್ತಷ್ಟೆ..." ಎನ್ನುವಷ್ಟರಲ್ಲಿ, ಮೂರ್ತಿ- "ಹೌದು, ನನಗೆ ಆ ಹುಡುಗಿಯನ್ನು ಸರಿಯಾಗಿ ನೋಡಿದ ನೆನಪೂ ಸಹ ಇಲ್ಲ. ಅಷ್ಟರಲ್ಲೇ ತೀರ್ಮಾನವಾಗಿ ಹೋಯಿತು" ಎಂದ.
ಈ ಸುದ್ದಿ ತಿಳಿದಾಗ ಪ್ರಭಾವತಿ ಅಚಲಳಾಗಲಿಲ್ಲ; ಧೈರ್ಯಗೆಡಲಿಲ್ಲ; ಅಷ್ಟೇಕೆ, ಅವಳ ಮುಖದಲ್ಲಿ ಬದಲಾವಣೆಯ ಯಾವ ಚಿಹ್ನಯೂ ಕಾಣಬರಲಿಲ್ಲ. ಈ ಒಂದು ಸಣ್ಣ ಕಾರಣಕ್ಕಾಗಿ ಅವಳ ಮನಸ್ಸು ಧೃತಿಗೆಡುವಂಥದಾಗಿರಲಿಲ್ಲ. ಅಂದ ಮೇಲೆ ಮನಸ್ಸು ಬದಲಾಗುವ ಪ್ರಶ್ನೆಯೇ ದೂರ ಉಳಿಯಿತು. ಪ್ರಭಾವತಿಯ ಧೃಢ ನಿರ್ಧಾರವನ್ನು ಕಂಡು ಮೂರ್ತಿ, ಶೇಖರರು ಬೆರಗಾದರು.
ದೇವಸ್ಥಾನದಿಂದ ಹಿಂತಿರುಗಿದ ತಾಯಿತಂದೆಗಳಿಗೆ ಶೇಖರನೇ ಈ ಸುದ್ದಿಯನ್ನು ಹೇಳಿ, ಎಲ್ಲರಿಗೂ ಸಕ್ಕರೆ ಕೊಡಿಸಿದ. ಮೂರ್ತಿಯೊಡನೆ ಪ್ರಭಾವತಿಯ ವಿವಾಹ ನಡೆಸಲು ಮನೆಯಲ್ಲಿ ಎಲ್ಲರೂ ಒಪ್ಪಿದ್ದರೂ "ಎರಡನೇ ಮದುವೆ" ಎಂಬ ಕಾರಣಕ್ಕೆ ರಾಯರ ಮತ್ತು ಶಾರದಮ್ಮನವರ ಮನಸ್ಸು ಹಾಗೂ ಹೀಗೂ ಇತ್ತು. ಪ್ರಭಾವತಿಯೇ ಒಪ್ಪಿದ್ದಳೆಂಬ ಸುದ್ದಿ ತಿಳಿದ ಕೂಡಲೇ ಅವರು ಮರುಮಾತನಾಡಲಿಲ್ಲ. ಮೂರ್ತಿ, ಪ್ರಭಾವತಿ ಯೊಳಗಿನ ಪ್ರೇಮದ ಹಕ್ಕಿಗಳು ಗೂಡಿನಲ್ಲೇ ಬೆಳೆಯುತ್ತಿದ್ದು, ಈಗ ಸಂಚಾರ ಹೊರಡಲು ಸಮರ್ಥವಾಗಿದ್ದವು.
ಎಲ್ಲರೂ ಸಂತೋಷ ಸಂಭ್ರಮದಲ್ಲಿ ಮುಳುಗಿ ನಲಿಯುತ್ತಿದ್ದಾಗ ಅವಧಾನಿಗಳ ಸವಾರಿಯೂ ಚಿತೈಸಿತು. ಅವಧಾನಿಗಳು ಯಾವಾಗ ಬಂದರೂ ಅವರ ಕೈಯಲ್ಲಿ ನಾಲ್ಕುಮೂಲೆಗಳಲ್ಲಿ ಕುಂಕುಮ ಹಚ್ಚಿರುತ್ತಿದ್ದ ಜಾತಕದ ಪ್ರತಿಗಳೇ ಶೋಭಿಸುತ್ತಿರುತ್ತಿದ್ದವು. ಇಂದೂ ಸಹ ಅವರ ಕೈಯಲ್ಲಿ ಅಂತಹದೇ ಒಂದು ಪ್ರತಿಯಿತ್ತು. ಅವಧಾನಿಗಳು ಮನೆಯೊಳಕ್ಕೆ ಕಾಲಿಡುತ್ತಲೇ .. ಆಶ್ಚರ್ಯದಿಂದ "ಏನೋ ಸತ್ಯಾ.. ಇಲ್ಲಿದ್ದೀ.. ನಿನ್ನ ಜಾತಕ ರಾಯರಿಗೆ ಕೊಡೋಣಾಂತ ಈಗಿನ್ನೂ ಬರ್ತಾ ಇದೀನಿ ನಾನು... ನೀನಾಗಲೇ ಹಾಜರಾಗಿದ್ದೀಯಲ್ಲಾ!!.." ಎಂದರು.
"ಸತ್ಯ" ಎಂಬ ಹೆಸರು ಕೇಳಿ ಶೇಖರ, ಪ್ರಭಾವತಿ ತಬ್ಬಿಬ್ಬಾದರು.
ಅವರ ಸ್ಥಿತಿಯನ್ನು ಕಂಡು, ಮೂರ್ತಿಯೆ - "ತನ್ನ ಪೂರ್ಣ ಹೆಸರು ಸತ್ಯಮೂರ್ತಿ" ಎಂದ.

1 comment:

  1. ಚಲೋ ಮೈಸೂರು ಕಾದಂಬರಿಯಲ್ಲಿ ಕೆಲವು ಬದಲಾವಣೆಗಳಾಗಿವೆ. ಅದರಲ್ಲಿ ಸ್ವಾತಂತ್ರ ಚಳುವಳಿಯ ಘಟನೆಗಳು ಹೆಚ್ಚಾಗಿವೆ. ಗೊರೂರು ರಾಮಸ್ವಾಮಿ ಐಯಂಗಾರ್ ಅವರು ಸೊಗಸಾಗಿ ಮುನ್ನುಡಿ ಯನ್ನು ಬರೆದಿದ್ದರೆ.

    ReplyDelete